ಬೆಂಗಳೂರಿನ ಹತ್ತು ಸಸ್ಯಾಹಾರಿ ರೆಸ್ಟೋರೆಂಟ್

ಬೆಂಗಳೂರಿನ ಈ ಹತ್ತು ಹೋಟೆಲಿಗೆ ಹೋಗಿಲ್ಲ ಅಂದ್ರೆ ನೀವು ಸಸ್ಯಾಹಾರಿ ಆಗಿಯೂ ಪ್ರಯೋಜನವಿಲ್ಲ!!!

ಆಹಾರ ಪ್ರಿಯರಿಗೆ ಬೆಂಗಳೂರು ಹೇಳಿ ಮಾಡಿಸಿದ ತಾಣ. ಮಾಂಸಹಾರಿ ಮತ್ತು ಸಸ್ಯಾಹಾರಿ ಪ್ರಿಯರಿಗೆ ವಿವಿಧ ಬಗೆಯ ಆಹಾರ ಖಾದ್ಯಗಳ ಉಣಬಡಿಸುವಲ್ಲಿ ಬೆಂಗಳೂರು ಎಂದು ಹಿಂದೆ ಬಿದ್ದಿಲ್ಲ. ಸೀಸನಿಗೆ ತಕ್ಕ ಹಾಗೆ ಅವರವರ ರುಚಿಗೆ ತಕ್ಕಂತೆ ಬೀದಿಬದಿಯಲ್ಲಿ, ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ರುಚಿಯಾದ ಆಹಾರ ನಮ್ಮ ಬೆಂಗಳೂರಿನಲ್ಲಿ ಸಿಗುತ್ತದೆ. ಸಸ್ಯಾಹಾರ ತಿಂಡಿಗಳಲ್ಲಿ ರುಚಿಯಾದ, ಶುಚಿಯಾದ ನೂರಾರು ಹೋಟೆಲ್ಗಳಿದ್ದರೂ ಅದರಲ್ಲಿ 10 ಹೋಟೆಲ್ (top 10 restaurants in Bangalore) ಸೆಲೆಕ್ಟ್ ಮಾಡೋದು ತುಂಬಾ ಕಷ್ಟ. ಆದರೆ ಈ ಹತ್ತು ಹೋಟೆಲ್ ಗೆ ನೀವು ಹೋಗಿಲ್ಲ ಅಂದ್ರೆ ನೀವು ತುಂಬ ರುಚಿಯಾದ ತಿಂಡಿಗಳನ್ನು ಮಿಸ್ ಮಾಡ್ಕೊಳ್ಳೋದು ಅಂತೂ ಖಚಿತ.

ಎಸ್ ಎಲ್ ವಿ ಬನಶಂಕರಿ ಬಿಡಿಎ (SLV Coffee Bar)

ಟಾಪ್ 10 ರೆಸ್ಟೋರೆಂಟ್‌ಗಳಲ್ಲಿ (top 10 restaurants in Bangalore) ಎಸ್ ಎಲ್ ವಿ ಕೂಡ ಒಂದು. ಬನಶಂಕರಿಯ ಬಿಡಿಎ ಕಾಂಪ್ಲೆಕ್ಸ್ ಹತ್ತಿರದಲ್ಲೇ ಇದ್ದು ಅತ್ಯಂತ ಪ್ರಖ್ಯಾತಿ ಆಗದಿದ್ದರೂ ರುಚಿ ಮತ್ತು ಶುಚಿ ವಿಚಾರದಲ್ಲಿ ಎಂದೂ ರಾಜಿ ಆಗಿಲ್ಲ. ಹಲವಾರು ಕನ್ನಡ ನಟರು ಈ ಹೋಟೆಲ್ ಗೆ ಬೇಟೆ ಕೊಟ್ಟಿದ್ದು ಇಲ್ಲಿನ ರುಚಿಗೆ ಅಭಿಮಾನಿ ಆಗಿದ್ದಾರೆ. ಇಲ್ಲಿ ಇಡ್ಲಿ, ವಡಾ,ಮಸಾಲೆದೋಸೆ,ಖಾರಾಬಾತ್, ಕೇಸರಿಬಾತ್ ಮತ್ತು ಕಾಫಿ ಇಲ್ಲಿನ ಫೇಮಸ್ ತಿನಿಸುಗಳು. ಇಡ್ಲಿ ಮತ್ತು ವಡೆ ಗೆ ಚಟ್ನಿಯಲ್ಲಿ ಡಿಪ್ ಮಾಡಿ ಕೊಡುವುದು ಇಲ್ಲಿನ ಇನ್ನೊಂದು ವಿಶೇಷ. ಬೇಸರದ ಸಂಗತಿ ಎಂದರೆ ಭಾನುವಾರದ ದಿನ ಈ ಹೋಟೆಲ್ ತೆರೆದಿರವುದಿಲ್ಲ.

ಸ್ಥಳ: 186, 24ನೇ ಅಡ್ಡರಸ್ತೆ ಬನಶಂಕರಿ 2ನೇ ಹಂತ, ಬೆಂಗಳೂರು

ಮಾವಳ್ಳಿ ಟಿಫಿನ್ ರೂಮ್ (Mavalli Tiffin Room)

ಬೆಸ್ಟ್ ರೆಸ್ಟೋರೆಂಟ್‌ಗಳಲ್ಲಿ MTR ಅಂದರೆ ಮಾವಳ್ಳಿ ಟಿಫನ್ ರೂಮ್ ಕೂಡ ಒಂದು. ಈ ರೆಸ್ಟೋರೆಂಟ್ ಬೆಂಗಳೂರಿನಾದ್ಯಂತ 8 ಶಾಖೆಗಳನ್ನು ಹೊಂದಿದೆ ಮತ್ತು ಅತಿ ಕಡಿಮೆ ಬೆಲೆಯಲ್ಲಿ ರುಚಿ-ರುಚಿಯಾದ ದಕ್ಷಿಣ ಭಾರತೀಯ ಆಹಾರ ತಿನಿಸುಗಳನ್ನು ಒದಗಿಸುತ್ತದೆ. ಈ ರೆಸ್ಟೋರೆಂಟ್ ಅನ್ನು ಕರ್ನಾಟಕದ ಉಡುಪಿಯ ಮೈಯಾ ಸಹೋದರರು ಸ್ಥಾಪಿಸಿದ್ದು, ಇಲ್ಲಿನ ಅತ್ಯಂತ ಜನಪ್ರಿಯ ಆಹಾರಗಳೆಂದರೆ ತುಪ್ಪದ ಮಸಾಲೆ ದೋಸೆ, ರವಾ ಇಡ್ಲಿ, ಗರಿಗರಿಯಾದ ವಡಾ ಮತ್ತು ಫಿಲ್ಟರ್ ಕಾಫಿ.

ಸ್ಥಳ: 14, ಲಾಲ್ಬಾಗ್ ರೋಡ್, ಮಾವಳ್ಳಿ, ಬಸವನಗುಡಿ

ರೋಟಿ ಘರ್ (ROTIGHAR)

ಉತ್ತರ ಮತ್ತು ದಕ್ಷಿಣ ಭಾರತದ ಸಸ್ಯಾಹಾರಿ ತಿಂಡಿ ತಿನಿಸುಗಳನ್ನು ಸ್ವಾದಿಸಲು ಉತ್ತಮ ಸ್ಥಳವಾಗಿದೆ. ಬೆಲೆಗಳು ತುಂಬಾ ಸಮಂಜಸವಾಗಿದ್ದು ಯಾವಾಗಲೂ ಜನಸಂದಣಿಯಿಂದ ಕೂಡಿರುತ್ತದೆ. ನೆಲ ಮಹಡಿಯಲ್ಲಿ ತ್ವರಿತ ಅಥವಾ ಸೆಲ್ಫಸರ್ವಿಸ್ ಆಹಾರವನ್ನು ಪಡೆದುಕೊಳ್ಳುವ ಅವಕಾಶವಿದ್ದು ಮತ್ತು 1 ನೇ ಮಹಡಿಯಲ್ಲಿ ಕುಟುಂಬ ಊಟದ ಪ್ರದೇಶವಿದೆ. “ಭರ್ಜರಿ ಊಟ” ಎಂದು ಕರೆಯಲ್ಪಡುವ ಅನಿಯಮಿತ ಊಟವೂ ಇದಾಗಿದ್ದು. ಒಂದು ಊಟದ ಬೆಲೆ ರೂ. 190 ಆಗಿದ್ದು, ನೀರಿನ ಬಾಟಲ್, ಬಗೆಬಗೆಯ ಸೂಪ್‌ಗಳು, ವಿವಿಧ ರೀತಿಯ ಸೊಪ್ಪಿನ ಪಲ್ಯಗಳು, ಉಪ್ಪಿನಕಾಯಿ, ಚಟ್ನಿಯೊಂದಿಗೆ ದೋಸೆ, ಹೋಳಿಗೆ, ಗ್ರೇವಿಯೊಂದಿಗೆ ಅಕ್ಕಿ ರೊಟ್ಟಿ, 2 ವಿಧದ ರೈಸ್‌ಬಾತ್, ರಸಂ ಮತ್ತು ಸಾಂಬಾರ್‌ನೊಂದಿಗೆ ಅನ್ನ, ಮೊಸರನ್ನ ಮತ್ತು ಐಸ್‌ಕ್ರೀಂ ಒಳಗೊಂಡಿದೆ. . ಇದು ಗಾಂಧಿಬಜಾರ್‌ನ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.

ಸ್ಥಳ: ಗಾಂಧಿ ಬಜಾರ್, ಬಸವನಗುಡಿ, ಬೆಂಗಳೂರು,

ವಿದ್ಯಾರ್ಥಿ ಭವನ್ (Vidyarthi Bhavan)

ದಕ್ಷಿಣ ಭಾರತದ ತಿನಿಸುಗಳನ್ನು ಇಷ್ಟಪಡುವರಿಗಂತು ಇದು ಹಾಟ್ಸ್ಪಾಟ್. ಬಸವನಗುಡಿಗೆ ಇದೊಂದು ಹೆಗ್ಗುರುತು ಅಂತ ಹೇಳಿದರೆ ಸುಳ್ಳಾಗಲ್ಲ. ಕನ್ನಡ ಪ್ರಸಿದ್ಧ ನಟರಾದ ಡಾ| ರಾಜಕುಮಾರ್ ಈ ಹೋಟೆಲ್ ಗೆ ಭೇಟಿ ಕೊಟ್ಟಿದ್ದು ಇಲ್ಲಿನ ತಿನಿಸುಗಳ ರುಚಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು.ಇಲ್ಲಿನ ಹಳೆಯ ಕಟ್ಟಡದ ವಾತಾವರಣ ಮತ್ತು ಗೋಡೆಗಳ ಮೇಲೆ ನೇತಾಡುವ ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರಗಳು ವಿಭಿನ್ನ ಅನುಭವ ನೀಡುತ್ತದೆ .ಕಡಿಮೆ ಬೆಲೆಗೆ ಉತ್ತಮ ಆಹಾರವು ಈ ಸ್ಥಳದ ವಿಶಿಷ್ಟ ಆದರೆ ಇಲ್ಲಿನ ರುಚಿಯಾದ ಗರಿಗರಿಯಾದ ಮಸಾಲೆ ದೋಸೆಗಳು ಮತ್ತು ವಿವಿಧ ದೋಸೆಗಳನ್ನು ತಿನ್ನಬೇಕಾದರೆ ನಿಮಗೆ ತಾಳ್ಮೆ ಒಂದು ಚೂರು ಹೆಚ್ಚೇ ಇರಬೇಕು.

ಸ್ಥಳ: 32, ಗಾಂಧಿ ಬಜಾರ್, ಗಾಂಧಿ ಬಜಾರ್ ಸರ್ಕಲ್ ಹತ್ತಿರ, ಬಸವನಗುಡಿ

Top 10 Indian Vegetarian Food

ಪಾಕಶಾಲಾ (Paakashala)

ಬೆಂಗಳೂರಿನ ಅತ್ಯಂತ ಬೆಸ್ಟ್ ರೆಸ್ಟೋರೆಂಟ್ ಗಳಲ್ಲಿ ಪಾಕಶಾಲಾ ಕೂಡ ಒಂದಾಗಿದ್ದು ಉನ್ನತ ದರ್ಜೆಯ, ರುಚಿಕರವಾದ ಮತ್ತು ಒಳ್ಳೆಯ ಗುಣಮಟ್ಟವು ಆಹಾರ ಇಲ್ಲಿ ದೊರೆಯುತ್ತದೆ. ಶನಿವಾರ ಮತ್ತು ಭಾನುವಾರದಂದು ಜನಜಂಗುಳಿ ಇಂದ ಕೂಡಿದ್ದು, ಬೆಂಗಳೂರಿನಾದ್ಯಂತ ಅನೇಕ ಬ್ರ್ಯಾಂಚ್ ಗಳನ್ನು ಹೊಂದಿದ್ದು ಒಂದೇ ರೀತಿಯ ಆಹಾರಗಳನ್ನು ನೀಡುತ್ತಿದ್ದಾರೆ. ಸೇವೆಯ ಗುಣಮಟ್ಟ ಹೆಚ್ಚಿರುವ ಕಾರಣ ತಿನಿಸುಗಳ ದರ ತುಸು ಹೆಚ್ಚಾಗಿಯೇ ಇದೆ.

ಶಾಖೆಗಳು: ಚಂದ್ರ ಲೇಔಟ್, ಎಂಜಿ ರಸ್ತೆ, ಯೆಲ್ಚೆನಹಳ್ಳಿ, ಜಯನಗರ 4ನೇ ಬ್ಲಾಕ್, ಇಂದಿರಾ ನಗರ, ರಾಜರಾಜೇಶ್ವರಿ ನಗರ

ಬ್ರಾಹ್ಮಣರ ಕಾಫಿ ಬಾರ್ (Brahmin’s Coffee Bar)

ಮಾವಳ್ಳಿ ಟಿಫಿನ್ ರೂಮ್ ಮೂವರು ಮೈಯಾ ಸಹೋದರರಲ್ಲಿ ಒಬ್ಬರು ಆರಂಭಿಸಿರುವ ಈ ಕೆಫೆಯು ತಿಂಡಿ ತಿನಿಸು ಪ್ರಿಯರಿಗೆ ರುಚಿ ಹಾಗು ಶುಚಿಯಾದ ಆಹಾರ ಕೊಡುವಲ್ಲಿ ಹಿಂದೆಬಿದ್ದಿಲ್ಲ. ಚಾಮರಾಜಪೇಟೆ ಸುತ್ತಮುತ್ತಲಿನ ಜನರಿಗೆ ಇದೊಂದು ನೆಚ್ಚಿನ ತಾಣ. ರುಚಿಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ರೆಸ್ಟೋರೆಂಟ್ ಗಳಲ್ಲಿ ಇದು ಒಂದು. ಇಲ್ಲಿನ ದೋಸೆ ಮತ್ತು ಚಟ್ನಿ ತನ್ನದೇ ಆದ ವಿಭಿನ್ನ ರುಚಿ ಹೊಂದಿದ್ದು ಎಲ್ಲರ ಮನ ಗೆದ್ದಿದೆ.

ಸ್ಥಳ: ರಂಗರಾವ್ ರಸ್ತೆ, ಶಂಕರ ಮಠದ ಹತ್ತಿರ, ಶಂಕರಪುರಂ, ಬಸವನಗುಡಿ ಪ್ರದೇಶ, ಬಸವನಗುಡಿ

ಶ್ರೀ ಸಾಗರ್ (CTR)

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇರುವ ಬೆಣ್ಣೆ ದೋಸೆಗೆಂದೇ ಹೆಸರುವಾಸಿಯಾಗಿರುವ ಶ್ರೀ ಸಾಗರ್ ರೆಸ್ಟೋರೆಂಟ್ ಯಾವಾಗಲೂ ಆಹಾರ ಪ್ರಿಯರಿಂದ ಕೂಡಿರುತ್ತದೆ. ದಕ್ಷಿಣಭಾರತದ ಸಾಕಷ್ಟು ತಿಂಡಿ ತಿನಿಸುಗಳು ಇಲ್ಲಿ ದೊರೆಯುತ್ತದೆ. ಇಲ್ಲಿನ ಫೇಮಸ್ ತಿಂಡಿಗಳಲ್ಲಿ ಮಂಗಳೂರಿನ ಬಜ್ಜಿ, ಪೂರಿ-ಸಾಗು ಮತ್ತು ಮದ್ದೂರ್ ವಡೆ ಎಲ್ಲರ ಬಾಯಿಯಲ್ಲಿ ನೀರೂರಿಸುತ್ತದೆ . ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟರೆ ಮತ್ತೆ ಮತ್ತೆ ನೀವು ಅಲ್ಲಿಗೆ ಭೇಟಿ ಕೊಡುವುದು ಅಂತೂ ಖಂಡಿತ.

ಸ್ಥಳ: 7ನೇ ಕ್ರಾಸ್, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ

ತಾಜಾ ತಿಂಡಿ (Taaza Thindi)

ತಾಜಾ ತಿಂಡಿಯ ಹೆಸರಿನಂತೆ ತಿಂಡಿಗಳನ್ನು ತಾಜಾ ಹಾಗು ರುಚಿಕರವಾಗಿ ಕೊಡುವುದರಲ್ಲಿ ಸಂದೇಹವಿಲ್ಲ. ಜಯನಗರ ಅಲ್ಲದೆ ಬೆಂಗಳೂರಿನಾದ್ಯಂತ ಫೇಮಸ್ ಆಗಿದ್ದು ಇಲ್ಲಿನ ರುಚಿ ಮತ್ತು ಹೋಟೆಲ್ ನ ಕೆಲಸಗಾರರ ದಕ್ಷ ಸೇವೆಯ ಕಾರಣದಿಂದಾಗಿ ಜನರಿಂದ ತುಂಬಿರುತ್ತದೆ. ಈ ರೆಸ್ಟೋರೆಂಟ್ ದಕ್ಷಿಣ ಭಾರತೀಯ ತಿಂಡಿಗಳಿಗಳನ್ನು ರುಚಿಯಾಗಿ ಬಡಿಸುವುದರಲ್ಲಿ ಹೆಸರುವಾಸಿಯಾಗಿದ್ದು ಜಯನಗರದ ಜನರಿಗೆ ಹಾಟ್ ಸ್ಪಾಟ್ ಆಗಿದೆ.

ಸ್ಥಳ: 1004, 26ನೇ ಮುಖ್ಯ, ಎಚ್‌ಡಿಎಫ್‌ಸಿ ಬ್ಯಾಂಕ್ ಪಕ್ಕ, 4ನೇ ಟಿ ಬ್ಲಾಕ್, ಜಯನಗರ

ಮಯ್ಯಾಸ್ (Maiyas Beverages And Foods Private Limited)

ಜಯನಗರದ ಫೇಮಸ್ ಹೋಟೆಲ್ಗಳಲ್ಲಿ ಒಂದಾಗಿರುವ ಮಯ್ಯಾಸ್ ತನ್ನ ಗುಣ ಮಟ್ಟದ ಆಹಾರ ಖಾದ್ಯಗಳಿಂದ ಹೆಸರುವಾಸಿಯಾಗಿದೆ. ಕಿರಿಯರಿಂದ ಹಿರಿಯರವರೆಗೂ ಇಷ್ಟ ಪಡುವ ಈ ರೆಸ್ಟೋರೆಂಟ್ ಉತ್ತರ ಮತ್ತು ದಕ್ಷಿಣ ಭಾರತದ ಎಲ್ಲ ರೀತಿಯ ಆಹಾರಗಳನ್ನು ಅತ್ಯಂತ ರುಚಿಯಾಗಿ ಉಣಬಡಿಸುವುದರಲ್ಲಿ ಒಂದು ಹೆಜ್ಜೆ ಮುಂದಿದೆ. ಸಂಜೆ ವೇಳೆಯಲ್ಲಿ ಇಲ್ಲಿನ ಕಾಫಿಯನ್ನು ಸವಿಯಲು ಜನ ಜಾತ್ರೆ ಸೇರಿರುತ್ತಾರೆ. ಸೌತ್ ಇಂಡಿಯನ್ ಮತ್ತು ನಾರ್ತ್ ಇಂಡಿಯನ್ ಊಟ ಇಲ್ಲಿ ಅನಿಯಮಿತ ಪದ್ಧತಿಯಂತೆ ಬಾಳೆ ಎಲೆಯಲ್ಲಿ ದೊರೆಯುತ್ತದೆ.

ಸ್ಥಳ: 30ನೇ ಅಡ್ಡರಸ್ತೆ, 4ನೇ ಬ್ಲಾಕ್, ಜಯನಗರ, ಬೆಂಗಳೂರು

ಉಪಹಾರ ದರ್ಶಿನಿ (Upahara Darshini, UD)

ಪ್ರಭಾಕರ್ ಆರ್ ಎನ್ನುವವರು 1983ರಲ್ಲಿ ಸ್ಥಾಪಿಸಿದ ಈ ರೆಸ್ಟೋರೆಂಟ್ ಬೆಂಗಳೂರಿನ ಹೆಸರುವಾಸಿ ರೆಸ್ಸ್ಟೋರೆಂಟ್ ಗಳಲ್ಲಿ ಒಂದಾಗಿದ್ದು. ದಕ್ಷಿಣ ಭಾರತದ ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ನೀಡುವಲ್ಲಿ ಉತ್ತಮ ಸ್ಥಾನ ಹೊಂದಿದೆ. ಮಸಾಲೆದೋಸೆ ಮತ್ತು ರಾಗೀದೋಸೆ ಇಲ್ಲಿನ ವಿಶೇಷ ತಿನಿಸುಗಳಲ್ಲಿ ಒಂದು. ಜಯನಗರ ಮತ್ತು ಬಸವನಗುಡಿಯಲ್ಲಿ ಇರುವ ಶಾಖೆಗಳು ಹೆಚ್ಚು ಜನಪ್ರಿಯ ಹೊಂದಿದೆ, ನೀವು ಈ ರುಚಿಯನ್ನು ಸವಿಯುದನ್ನು ಮಿಸ್ ಮಾಡಿಕೊಳ್ಳಬೇಡಿ.

ಶಾಖೆಗಳು: ಜಯನಗರ, ಸೌತೆಂಡ್ ಸರ್ಕಲ್, ಬಸವನಗುಡಿ

Related posts